ಗ್ರೀಕ್ ಕಲೆ, ವಾಸ್ತು, ಶಿಲ್ಪ

ಪಾಶ್ಚಾತ್ಯ ಕಲೆ, ವಾಸ್ತು, ಶಿಲ್ಪ ಬಹು ಮಟ್ಟಿಗೆ ಗ್ರೀಕ್ ಶೈಲಿಯಿಂದ ಪ್ರೇರಿತವಾಗಿವೆ. ಗ್ರೀಕ್ ಎಂಬುದು ಹಲವಾರು ಜನಾಂಗಗಳ ಸಮುದಾಯಕ್ಕೆ ಅನ್ವಯಿಸಬಹುದಾದ ಪದ. ಗ್ರೀಸಿನ ದ್ವೀಪಗಳಲ್ಲಿ ವಾಸಿಸುತ್ತಿದ್ದ ಮೂಲನಿವಾಸಿಗಳು ಮೂರು ಸಲ ಹೊರಗಿನಿಂದ ವಲಸೆ ಬಂದ ಜನರೊಂದಿಗೆ ಬೆರೆತುಕೊಂಡರು. ಹೀಗೆ ವಲಸೆ ಬಂದ ಒಂದೊಂದು ಜನಾಂಗಕ್ಕೂ ನಡುವೆ ಕೆಲವು ಶತಮಾನಗಳ ಅಂತರವೇ ಇತ್ತು.

ಗ್ರೀಕ್ ಮೂಲನಿವಾಸಿಗಳು ಇದ್ದುದ್ದು ಸಿಕ್ಲಡೀಸ್Àó ದ್ವೀಪಗಳಲ್ಲಿ. ಆಥೆನ್ಸ್ ಸಮೀಪದ ಸಮುದ್ರತೀರದಿಂದ ಆಗ್ನೇಯಕ್ಕೆ ಸರಪಳಿಯಂತೆ ಈ ದ್ವೀಪಗಳು ಹಬ್ಬಿವೆ. ಇವರ ವಿಷಯ ತಿಳಿದಿರುವುದೆಲ್ಲ ಹೆಚ್ಚಿನ ಮಟ್ಟಿಗೆ ಇವರು ಬಿಟ್ಟುಹೋದ ಅವಶೇಷಗಳಿಂದ. ಕ್ರಿ.ಪೂ. 2000 ದ ಸುಮಾರಿಗೆ ಕ್ರೀಟ್ ದ್ವೀಪದಲ್ಲಿ ನಾಸಸ್ ನಗರದ ಪರಿಸರದಲ್ಲಿ ಅಪೂರ್ವವಾದ ನಾಗರಿಕತೆಯೊಂದು ಅಸ್ತಿತ್ವದಲ್ಲಿತ್ತು. ಇದನ್ನು ಸಾಮಾನ್ಯವಾಗಿ ಮಿನೋವನ್ ನಾಗರಿಕತೆ ಎಂದು ಕರೆಯಲಾಗಿದೆ. ಮೈನಾಸ್ ಎಂಬ ಒಬ್ಬ ಪೌರಾಣಕ ಅರಸ ಈ ದ್ವೀಪದಲ್ಲಿ ವಾಸಿಸುತ್ತಿದ್ದನೆಂದೂ ಇವನ ಬಳಿ ಅತ್ಯಂತ ಬಲಿಷ್ಠವಾದ ಮಿನಟಾರ್ ಎಂಬ ಗೂಳಿಯಿತ್ತೆಂದೂ ಕಥೆಗಳಲ್ಲಿ ಹೇಳಿದೆ. ಆ ಕಾಲದಲ್ಲಿ ಗೂಳಿಗಳ ಕದನ ಬಹಳ ಮೆಚ್ಚಿನ ಆಟವಾಗಿತ್ತು ಎಂಬುದು ಇದರಿಂದ ವ್ಯಕ್ತವಾಗುತ್ತದೆ. ಇದು ಅಂದಿನ ವರ್ಣಚಿತ್ರಗಳಲ್ಲೂ ಭಿತ್ತಿಚಿತ್ರಗಳಲ್ಲೂ ಕಂಡುಬಂದಿದೆ. ಈ ನಾಗರಿಕತೆಗೆ ಸೇರಿದ ಜನರಿಗೆ ಜೀವನದಲ್ಲಿ ಹೆಚ್ಚಿನ ಅಭಿರುಚಿಯೂ ತಮ್ಮ ಸಂಸ್ಕøತಿಯನ್ನು ಕುರಿತ e್ಞÁನವೂ ತೀವ್ರವಾಗಿತ್ತು. ರಾಜಧಾನಿಗೆ ಕೋಟೆ ಇಲ್ಲದಿರುವುದನ್ನು ಗಮನಿಸಿದರೆ ಇವರು ತಮ್ಮ ರಕ್ಷಣೆಗೆ ಬಹಳ ಮಟ್ಟಿಗೆ ನೌಕಾಬಲವನ್ನೇ ಅವಲಂಬಿಸಿದ್ದರೆಂಬುದು ಸ್ಪಷ್ಟವಾಗುತ್ತದೆ. 
ಕ್ರಿ.ಪೂ. 1400 ರ ವೇಳೆಗೆ ಕ್ರೀಟ್ ದ್ವೀಪ ಶತ್ರುವಿನ ದಾಳಿಗೆ ತುತ್ತಾಯಿತು. ನಾಸಸ್ ನಗರ ಭಸ್ಮವಾಯಿತು. ಇದಕ್ಕೆ ಕಾರಣರು ಅಕೀಯನರು. ಇವರು ಆರ್ಗಲಿಸ್ ಖಾರಿಯ ಸಮೀಪದ ಮೈಸೀನೀ ಮತ್ತು ಟಿರಿನ್ಸ್ ನಗರದಲ್ಲಿದ್ದ ಜನ ಸಾಂಸ್ಕøತಿಕವಾಗಿ ಮಿನೋವನರಿಗಿಂತ ಹೆಚ್ಚು ಒರಟರಾದ ಈ ಜನ ಆ ಸಂಸ್ಕøತಿಯ ಅನೇಕ ಅಂಶಗಳನ್ನು ಆತ್ಮೀಕರಿಸುವುದರಲ್ಲಿ ಯಶಸ್ವಿಯಾದರು. 

ಕ್ರಿ.ಪೂ. 1100 ರ ವೇಳೆಗೆ ಇವರ ಸ್ಥಾನವನ್ನು ಡೋರಿಯನರು ಆಕ್ರಮಿಸಿದರು. ಇವರಿಗೆ ಕಬ್ಬಿಣದ ಉಪಯೋಗ ತಿಳಿದಿತ್ತು. ಉಳಿದ ಹಾಗೂ ಸ್ವಾಮಿತ್ವಗಳಿಗೆ ಬೇಕಾದ ಲಕ್ಷಣಗಳು ಈ ಜನರಲ್ಲಿದ್ದುವು. ಆದರೂ ಇವರದು ಇವರ ಪೂರ್ವಜರಿಗಿಂತ ಕೀಳ್ಮಟ್ಟದ ಅಭಿರುಚಿಯಾಗಿತ್ತು. ಅಲ್ಲಿಂದ ನಾಲ್ಕು ಶತಮಾನಗಳ ಕಾಲದ ಗ್ರೀಕ್ ಇತಿಹಾಸವನ್ನು ಕಪ್ಪುಯುಗವೆನ್ನಲಾಗಿದೆ. ಆ ಶತಮಾನಗಳಿಗೆ ಸಂಬಂಧಿಸಿದ ವಿಷಯಗಳು ಯಾವುವೂ ತಿಳಿದಿಲ್ಲ. ಆದರೆ ಅದರಲ್ಲಿ ಕೆಲವಾದರೂ ಒಳ್ಳೆಯ ಗುಣಗಳಿದ್ದಿರಬೇಕು. ಏಕೆಂದರೆ ಅನಂತರದ ಗ್ರೀಕ್ ಇತಿಹಾಸ ತೇಜಸ್ವಿಯಾದ್ದೂ, ಉತ್ಕøಷ್ಟವಾದುದೂ ಆಗಿದೆ. ಗ್ರೀಕರ ಕಪ್ಪುಯುಗಕ್ಕೆ ಸೇರಿದವನು ಹೋಮರ್ ಕವಿ. ಈತನ ಹಿಂದಿನ ಕಾಲದ ವೈಭವದ ವರ್ಣನೆಯೇ ಈತನದೆನ್ನಲಾದ ಕೃತಿಗಳಲ್ಲಿ ಕಂಡುಬರುತ್ತದೆ. 
ಗ್ರೀಕರ ಕಲೆ, ವಾಸ್ತು, ಶಿಲ್ಪಗಳನ್ನು ಈ ಚಾರಿತ್ರಿಕ ಹಿನ್ನೆಲೆಯಲ್ಲಿ ಕಾಣಬೇಕು. 

ಕಲೆ : ಕ್ರಿ.ಪೂ. 3000ಕ್ಕೂ ಪ್ರಾಚೀನವಾದ ಕಲ್ಲಿನ ಪ್ರತಿಮೆಗಳು ಕೊರೆತಿವೆ. ಇವನ್ನು ಸಿಕ್ಲಾಡಿಕ್ ವಿಗ್ರಹಗಳೆಂದೇ ಕರೆಯಲಾಗಿದೆ. ಲೂವ್ರ್ ಮತ್ತು ಬ್ರಿಟಿಷ್ ವಸ್ತುಸಂಗ್ರಹಾಲಯಗಳಲ್ಲಿ ಈ ವಿಗ್ರಹಗಳನ್ನು ಇಡಲಾಗಿದೆ. ಮೂರ್ಖತೆಯ ಒರಟು ವಿಗ್ರಹಗಳೆಂದು ಹಿಂದೆ ಇವನ್ನು ವಿಮರ್ಶಕರು ಬದಿಗೊತ್ತಿದ್ದರು. ಆದರೆ ಇಂದು ಇವನ್ನು ಹೆಚ್ಚು ಸೂಕ್ಷ್ಮವಾಗಿ ಅಭ್ಯಾಸ ಮಾಡಲಾಗಿದೆ. ಇವುಗಳಲ್ಲಿ ಹಲವಾರು ಹಣನೀಯ ಅಂಶಗಳಿವೆ. ಮೂಲತಃ ಈ ವಿಗ್ರಹಗಳಿಗೆ ವರ್ಣಲೇಪನ ಮಾಡಲಾಗಿತ್ತು. ಆದರೆ ಇಂದು ಆ ಬಣ್ಣಗಳು ಅಳಿಸಿ ಹೋಗಿವೆ. ಇವಕ್ಕೆ ಯಾವ ವರ್ಣದ್ರವ್ಯಗಳನ್ನು ಉಪಯೋಗಿಸಲಾಗಿತ್ತೆಂದು ಹೇಳುವುದೂ ಕಷ್ಟ. ಇವುಗಳ ನಿರ್ಮಾಣದಲ್ಲಿ ಅಮೂರ್ತ ವಿಧಾನ ಒಬ್ಬ ಮನುಷ್ಯನನ್ನು, ಒಂದು ದೃಶ್ಯವನ್ನು, ಒಂದು ವಸ್ತುವನ್ನು ಸಾಂಕೇತಿಕವಾಗಿ ಅಭಿವ್ಯಕ್ತಿಸುವ ಯತ್ನವನ್ನು ಈ ಅಮೂರ್ತ ಭಾವನಾತ್ಮಕ ವಿಗ್ರಹಗಳಲ್ಲಿ ಕಾಣಬಹುದು. 

ಚಿತ್ರ1ರ ವಿಗ್ರಹದಲ್ಲಿ ಕೈಕಟ್ಟಿ ನೆಟ್ಟಗೆ ನಿಂತ ಒಬ್ಬಾತ ಯಾವುದೋ ಒಂದು ಸಮಾರಂಭದಲ್ಲಿ ಭಾಗವಹಿಸುತ್ತಿರುವಂತೆ ತೋರುತ್ತದೆ. ಅವನ ದೇಹ ಸತ್ತ್ವಯುಕ್ತವಾದ್ದೆಂಬುದು ಮುಂಡ, ತೊಡೆಗಳು ಹಾಗೂ ಭುಜಗಳಿಂದ ಗೊತ್ತಾಗುತ್ತದೆ. ರುಂಡದಲ್ಲಿ ಕಾಣುವುದೆಲ್ಲ ಮೂಗೊಂದೇ. ಆ ವಿಗ್ರಹದಲ್ಲಿ ಶ್ರೀಮಂತಿಕೆಯ ಗಾಂಭೀರ್ಯವನ್ನೂ ಸ್ವಲ್ಪ ಮಟ್ಟಿನ ದುರಭಿಮಾನವನ್ನೂ ಕಾಣಬಹುದು. 
ಮಿನೋವನರ ಕಲೆಯಲ್ಲಿ ಅಮೂರ್ತಭಾವನೆಗಳಿದ್ದರೂ ಪ್ರಾಣಿಗಳು, ಸಸ್ಯಗಳು, ಮೀನುಗಳು, ಪುಷ್ಪಗಳು ಹಾಗೂ ಮನುಷ್ಯರ ಚಿತ್ರಣದಲ್ಲಿ ಉಲ್ಲಾಸ ಎದ್ದು ತೋರುತ್ತದೆ. ಚಿನ್ನದ ಬಟ್ಟಲುಗಳ ಮೇಲೆ ಹುಲ್ಲುಗಾವಲಿನಲ್ಲಿ ಮೇಯುತ್ತಿರುವ ಪಳಗಿಸಿದ ಗೂಳಿಗಳಲ್ಲಿಯ ಆಮೋದ ಚಿತ್ರಿತವಾಗಿರುವುದು ಕಾಣುತ್ತದೆ. ಇನ್ನೊಂದರಲ್ಲಿ ಮಿನೋವನರು ಜೀವದ ಹಂಗು ತೊರೆದು ಕಾಡುಗೂಳಿಗಳನ್ನು ಹಿಡಿಯುತ್ತಿರುವ ಚಿತ್ರವಿದೆ. 

ಡೋರಿಯನರದು (ಕ್ರಿ.ಪೂ. 1100-700) ರೇಖಾವಿನ್ಯಾಸ ಶೈಲಿ ಎನ್ನಬಹುದು. ಅವರ ಕಾಲಕ್ಕೆ ಸೇರಿದ ಕಂಚಿನ ವಿಗ್ರಹಗಳ ಮತ್ತು ಪಾತ್ರೆಗಳ ಮೇಲೆ ಬಿಡಿಸಲಾದ ಚಿತ್ರಗಳಿಂದ ಇದು ಸ್ಪಷ್ಟವಾಗಿದೆ. ಮಾನವ ಹಾಗೂ ಪ್ರಾಣಿ ದೇಹಗಳ ಸಹಜ ವಕ್ರತೆಗಳನ್ನು ಇಲ್ಲಿ ಕಮಾನುಗಳಂತೆ ಅಥವಾ ಕೋನಗಳಂತೆ ತೋರಿಸಲಾಗಿದೆ. ಇವು ಡೊಂಕಾದ ಗೆರೆಗಳು, ಸಮಾಂತರ ಗೆರೆಗಳು ಮುಂತಾದ ಜ್ಯಾಮಿತೀಯ ರೂಪಗಳನ್ನು ತಾಳಿವೆ. ಶವಯಾತ್ರೆ, ನೌಕಾಯುದ್ಧ ಇತ್ಯಾದಿಗಳ ಚಿತ್ರಗಳನ್ನು ಸಾಮಾನ್ಯವಾಗಿ ಈ ಕಾಲದ ಬಟ್ಟಲುಗಳ ಮೇಲೆ (ಪಾನಪಾತ್ರೆಗಳ ಮೇಲೆ) ಬಿಡಿಸಲಾಗಿದೆ. 

ಕ್ರಿ.ಪೂ. 7 ನೆಯ ಶತಮಾನದಲ್ಲಿ ಗ್ರೀಕರ ಕಲೆ ಪೌರಸ್ತ್ಯರ, ಹೆಚ್ಚಾಗಿ ಪರ್ಷಿಯನ್ನರ ಪ್ರಭಾವಕ್ಕೊಳಗಾಯಿತು. ವಿಕಟಾಲಂಕಾರದ ಭೀಭತ್ಸಗಳು, ಗುಲಾಬಿಯ ಆಕಾರದ ಅಲಂಕಾರಗಳು, ಪಕ್ಷಿಗಳು - ಇವು ಕಲೆಗೆ ಸಾಮಗ್ರಿಗಳು. ರಂಗು ರಂಗಿನ ಚಿತ್ರಮಯ ಬಟ್ಟೆಗಳನ್ನು ನೇಯುವ ಕಲೆಗಳಲ್ಲಿ ಪರ್ಷಿಯ ಪರಿಣತಿ ಪಡೆದಿತ್ತು. ಆದ್ದರಿಂದ ಅಲ್ಲಿ ನಿಶ್ಚಲ ಚಿತ್ರಗಳಿಗೆ ಪಾಧಾನ್ಯವಿತ್ತು. ಗ್ರೀಕರು ಪರ್ಷಿಯನ್ನರಿಂದ ಈ ವಿನ್ಯಾಸವನ್ನು ಎರವಲು ಪಡೆದು ಪಾನಪಾತ್ರೆಗಳ ಮೇಲೆ ರೂಪಿಸಿದಾಗ ಅವು ನೀರಸವೂ ನಿಸ್ಸತ್ತ್ವವೂ ಆದುವು. (ಚಿತ್ರ 4)

ಗ್ರೀಕ್ ಕಲೆಯ ಶ್ರೇಷ್ಠ ಕಾಲ ಉದಯವಾದ್ದು ಇಂಥ ಹಿನ್ನೆಲೆಯಲ್ಲಿ. ಇಲ್ಲಿ ಸಾಮಾನ್ಯವಾಗಿ ಐದು ಘಟ್ಟಗಳನ್ನು ಗುರುತಿಸಬಹುದು. ಮೊದಲನೆಯದು ಆರ್ಷೇಯ ಆ ಕಾಲದಲ್ಲಿ ರೂಪಿತವಾದ ಮನುಷ್ಯಾಕೃತಿಗಳಲ್ಲಿ ಸಾಮಾನ್ಯವಾದ ಅಂಗ ರಚನೆಯ ದೋಷಗಳನ್ನು, ಭಾವಪ್ರದರ್ಶನದಲ್ಲಿ ಅನೌಚಿತ್ಯವನ್ನು ಭೀರುವಾದ ತಂತ್ರಗಳನ್ನು ನೋಡಬಹುದು. ಈ ಕೊರತೆಗಳನ್ನು ಪರಿವರ್ತನ ಕಾಲದಲ್ಲಿ ಸ್ವಲ್ಪ ಮಟ್ಟಿಗೆ ನಿವಾರಿಸಿಕೊಳ್ಳಲಾಯಿತು. ಆದರೆ ಭಂಗಿಯಲ್ಲಿ ಇನ್ನೂ ಸ್ವಲ್ಪ ಗಡುಸು ತುಂಬಿಕೊಂಡಿತ್ತು. ಇದೂ ಆ ಕಾಲದ ಕೊನೆಯ ವರ್ಷಗಳಲ್ಲಿ ಪರಿವರ್ತಿತವಾಯಿತು. 

ಕ್ರಿ.ಪೂ. 450 ರಿಂದ 323 ರ ವರೆಗಿನ ಕಾಲವನ್ನು ಪೆರಿಕ್ಲೀಸ್ ಯುಗವೆಂದೂ ಮಹಾಯುಗವೆಂದೂ ಕರೆಯಲಾಗಿದೆ. ಈ ಕಾಲದಲ್ಲಿ ಸರ್ವತೋಮುಖ ಪ್ರಗತಿ ಸಾಧಿಸಿತು. ಬೃಹತ್ತಾದ ಪೌರ ಕಟ್ಟಡಗಳ ನಿರ್ಮಾಣವಾದ್ದೂ ಗ್ರೀಕ್ ದೇವತೆಗಳ ಕೊಡ್ಡ ವಿಗ್ರಹಗಳನ್ನೂ ಕೆತ್ತಿದ್ದೂ ಆ ಕಾಲದಲ್ಲಿಯೇ. 

ವರ್ಗೀಕರಿಸಲಾದ ವಿಗ್ರಹಗಳು, ಕುಳಿತ ಭಂಗಿಯ ವಿಗ್ರಹಗಳು, ಹಾರುವ ಆಕೃತಿಗಳು, ನಿಂತಿರುವ ಪುರುಷ ಮತ್ತು ಸ್ತ್ರೀ ವಿಗ್ರಹಗಳು ಎಂದು ಆರ್ಷೇಯ ಕಾಲದ ವಿಗ್ರಹಗಳನ್ನು ನಾಲ್ಕು ರೆರನಾಗಿ ವಿಂಗಡಿಸಬಹುದು. ಚಿತ್ರದಲ್ಲಿ ತೋರುವ, ಅಮೃತ ಶಿಲೆಯಲ್ಲಿ ಕೆತ್ತಿದ, ನಿಂತ ಸ್ತ್ರೀ ವಿಗ್ರಹವನ್ನು ನೋಡಿದಾಗ ಅದು ಈಜಿಪ್ಟ್ ವಿಗ್ರಹಗಳಿಂದ ಪ್ರಭಾವಿತವಾದುದೆಂಬುದು ಸ್ಪಷ್ಟವಾಗುತ್ತದೆ. ಇದನ್ನು ನಿಕಾಂದ್ರ ಎಂಬವನು ಆರ್ಟೆಮಿಸನ ಗೌರವಾರ್ಥವಾಗಿ ಮುಡಿಪಿಟ್ಟನೆಂದು ಅಲ್ಲಿಯ ಆಸನವೊಂದು ತಿಳಿಸುತ್ತದೆ. ಈ ಹೆಣ್ಣಿನ ತಲೆಯ ಕೂದಲು ಎರಡು ಭಾಗಗಳಾಗಿ ಎರಡು ಭುಜಗಳ ಮುಂದೆಯೂ ಚೆಲ್ಲಾಡಿದೆ. ಕುತ್ತಿಗೆ ದೃಢವಾಗುವಂತೆ ಈಜಿಪ್ಟ್ ವಿಗ್ರಹಗಳ ಶಿಲ್ಪದಲ್ಲಿ ಅನುಸರಿಸುತ್ತಿದ್ದ ತಂತ್ರವಿದು. ಅಂತೆಯೇ ಇದೂ ಮುಮ್ಮುಖವಾಗಿದೆ.
ಅನಂತರದ ಕಾಲದ ಒಂದು ವಿಗ್ರಹ ವರ್ತುಲಾಕೃತಿಯಲ್ಲಿದೆ. ಮರದಲ್ಲಿ ಕೆತ್ತಿದ ವಿಗ್ರಹಗಳಂತೆ ಪೆಡಸಾಗಿ ಕಾಣುವ ಈ ವಿಗ್ರಹದ ಕೆಳಭಾಗ ಮರದ ಕಾಂಡದಂತಿದೆ. ಕಾಲಿನ ಬೆರಳುಗಳನ್ನು ಮಾತ್ರ ಬಿಡಿಸಲಾಗಿದೆ. ಸಾಂಪ್ರದಾಯಿಕವಾಗಿ ಬಂದ ಅಮೂರ್ತ ಶೈಲಿಯ ಪ್ರತೀಕವಿದು. ಈ ಕಾಲದಲ್ಲಿ ಈಜಿಪ್ಟ್ ಶೈಲಿಯ ಅನುಕರಣೆಯಾಯಿತೆನ್ನಲು ಇನ್ನೊಂದು ಆಧಾರವೆಂದರೆ, ಅಪೋಲೊ ದೇವತೆಗಳದೆಂದು ಮೊದಲು ಪರಿಗಣಿತವಾಗಿದ್ದು ಅನಂತರ ನವಯುವಕರದೆಂದು ನಾಮಕರಣ ಮಾಡಲಾದ ವಿಗ್ರಹಗಳಲ್ಲಿಯ ಮುಂಚಾಚಿರುವ ಎಡಗಾಲುಗಳು. (ಚಿತ್ರ 6)

ಆದರೂ ಗ್ರೀಕ್ ವಿಗ್ರಹಗಳಲ್ಲಿ ಎದ್ದು ಕಾಣುವ ವಿಶಿಷ್ಟತೆಯೆಂದರೆ ನಗ್ನತೆ. ಒಲಿಂಪಿಕ್ ಸ್ಪರ್ಧೆಯ (ನೋಡಿ- ಒಲಂಪಿಕ್---ಕ್ರೀಡೆಗಳು) ಸ್ಪರ್ಧಿಗಳಿಗೆ ಉಡುಗೆ ಚಲನೆಗೆ ಅಡ್ಡಿಯಾಗುವುದೆಂಬ ಭಾವನೆಯಿತ್ತು. ಇದೇ ಭಾವನೆ ಕಲೆಯಲ್ಲೂ ವ್ಯಕ್ತವಾಗಿದೆ. ತೃಪ್ತ ಮನೋಭಾವವನ್ನು ಚಿತ್ರಿಸಲು ನಗ್ನತೆ ಹೆಚ್ಚು ಪೋಷಕ. ದೇಹದ ಎಲ್ಲ ಅಂಗಗಳಲ್ಲಿ, ಮಾಂಸಖಂಡಗಳಲ್ಲಿ ಚಲನೆಯನ್ನು ಮೂಡಿಸುವುದು ನಗ್ನತೆಯ ಚಿತ್ರಣದಿಂದ ಹೆಚ್ಚು ಸಾಧ್ಯ. ದೇಹವನ್ನು ವಸ್ತ್ರಗಳಿಂದ ಮುಚ್ಚಿದಾಗ, ಇವನ್ನು ಮೂಡಿಸುವ ಅವಕಾಶ ಬಹಳವಾಗಿ ಮುಖಕ್ಕೆ ಸೀಮಿತವಾಗಿರುತ್ತದೆ. ನಗ್ನತೆಗೂ ಶೃಂಗಾರಕ್ಕೂ ಸಂಬಂಧವಿದ್ದರೂ ಶ್ರಂಗಾರ ಪ್ರಣಯವನ್ನು ಮಾತ್ರ ಪ್ರಚೋದಿಸಲು ಮಾತ್ರವೇ ನಗ್ನತೆಯನ್ನು ಮಾಧ್ಯಮವಾಗಿ ಅವರು ಬಳಸಲಿಲ್ಲ. 

ಪರ್ಷಿಯನ್ ಕದನ ಕ್ರಿ.ಪೂ. ಸು. 480 ರ ವೇಳೆಗೆ ಮುಗಿದಿತ್ತು. ಈ ಕದನಗಳು ಗ್ರೀಕರನ್ನು ವಿನಾಶಕ್ಕೆ ಒಯ್ಯಬಹುದಿತ್ತು. ಆದರೆ ಗ್ರೀಕರ ಆದರ್ಶವಾದ ಅವರನ್ನು ಅಳಿವಿನ ವಿರುದ್ಧ ಹೋರಾಡಲು ಪ್ರೇರೆಪಿಸಿತು. ಇದರ ಪರಣಾಮವಾಗಿ ಅವರಿಗೆ ವಿಜಯ ಲಭ್ಯವಾಯಿತು. ಜೀವನದಲ್ಲಿ ಅವರು ಹೊಸ ಮೌಲ್ಯಗಳನ್ನು ಕಾಣುವಂತೆ ಮಾಡಿತು. ಶತ್ರುವಿನ ದಾಳಿಗೆ ಸಿಕ್ಕಿ ಹಾಳಾಗಿದ್ದ ನಗರಗಳಲ್ಲಿ ನವ ಚೇತನ ಉಕ್ಕಿ ಹರಿಯಿತು. ಗ್ರೀಕ್ ಕಲೆ ಪೂರ್ಣವಾಗಿ ಅರಳಿತು.

ಈ ನವಯುಗದ ಆರಂಭಕಾಲಕ್ಕೆ ಸೇರಿದ್ದು ಆಫ್ರೊಡೈಟಿ ದೇವತೆಯ ಜನನವನ್ನು ಸೂಚಿಸುವ ವಿಗ್ರಹ ಫಲಕ. ಈ ದೇವತೆ ಇಜೀಯನ್ ಸಮುದ್ರದ ನೊರೆಗಳಲ್ಲಿ ನವಯುವತಿಯಾಗಿ ಜನಿಸಿದಳೆಂಬ ಪ್ರಚಲಿತ ಕಥೆಯನ್ನು ಇಲ್ಲಿ ರೂಪಿಸಲಾಗಿದೆ. ಚಿತ್ರದಲ್ಲಿ ಆಕೆಯನ್ನು ನೀರಿನಿಂದ ಮೇಲಕ್ಕೆ ಎಳೆಯುತ್ತಿರುವ ದೃಶ್ಯವಿದೆ. ಈ ಶಿಲ್ಪದಲ್ಲಿ ಕೊರತೆಗಳಿಲ್ಲದಿಲ್ಲ. ಅಂಗ ರಚನೆಯಲ್ಲಿಯೇ ಕುಂದಿದೆ. ಸ್ತನಗಳೆರಡೂ ಎರಡು ಬದಿಗಳಲ್ಲಿವೆ. ತಲೆಯನ್ನು ಬಲಭಾಗಕ್ಕೆ ಹೊರಳಿಸಿದಾಗ ಆಗಬಹುದಾದ ಸ್ನಾಯುಗಳ ಸೆಳೆತಗಳಾವುವೂ ಇಲ್ಲಿ ಕಾಣುವುದಿಲ್ಲ. ಇವು ಮುಖ್ಯ ತಪ್ಪುಗಳು. ಆದರೂ ಈ ಶಿಲ್ಪ ಅನಂತರ ಬರಲಿದ್ದ ಭವ್ಯ ಕಲಾಕೃತಿಗಳ ಮುನ್ಸೂಚಿಯಂತಿದೆ.

ಈ ದೃಷ್ಟಿಯಿಂದ ಒಲಿಂಪಿಯದ ಜû್ಯೂಸ್ ದೇವಾಲಯದಲ್ಲಿ ಅಳವಡಿಸಿದ, ಹೆರಕ್ಲೀಸ್ ಗೂಳಿಯನ್ನು ಪಳಗಿಸುತ್ತಿರುವ ಚಿತ್ರ ಭವ್ಯವಾದ್ದು. (ಚಿತ್ರ 8) ಇಲ್ಲಿ ಕಾಣುವುದು ಗೂಳಿಯ ಹಾಗೂ ಹೆರಕ್ಲೀಸನ ನಡುವಣ ಘರ್ಷಣೆಯ ಒಂದು ಕ್ಷಣದ ಸ್ತಬ್ಧ ದೃಶ್ಯ. ಒಂದು ಕ್ಷಣದ ಹಿಂದೆ ಚಲನೆ ಇತ್ತು; ಒಂದು ಕ್ಷಂದ ಬಳಿಕ ಪುನಃ ಚಲನೆ ಇರುತ್ತದೆ. ಇವುಗಳ ನಡುವಣ ಕ್ಷಣದ ಸ್ತಬ್ಧಚಲನೆ ಇಲ್ಲಿ ರೂಪಿತವಾಗಿದೆ. ಗ್ರೀಕ್ ಕಲೆಯಲ್ಲಿ ಇದೂ ಒಂದು ಪದ್ಧತಿಯಾಗಿ ಉಳಿಯಿತು. 

 ಗ್ರೀಕ್ ಶಿಲ್ಪಕಾರರಲ್ಲಿ ಪ್ರಸಿದ್ಧರಾದ ಆರು ಜನರ ಹೆಸರುಗಳು ತಿಳಿದುಬಂದಿವೆ. ಅವರು ಮೈರಾನ್, ಫಿಡಿಯಸ್, ಪಾಲಿಕ್ಲೈಟಸ್, ಪ್ರಾಕ್ಸಿಟೆಲೀಸ್, ಸ್ಕೋಪಸ್ ಮತ್ತು ಲೈಸಿಪ್ಪಸ್. ಇವರಲ್ಲಿ ಕೊನೆಯವನು ಅಲೆಗ್ಸಾಂಡರನ ಆಶ್ರಯ ಪಡೆದಿದ್ದ. ಗ್ರೀಕ್ ಸಾಹಿತ್ಯದಲ್ಲಿ ಇವರ ಉಲ್ಲೇಖವಿದೆ. ಆದರೆ ಇವರು ಕೆತ್ತಿದವಿಗ್ರಹಗಳು ನಮಗೆ ದೊರೆತಿರುವುದು ಬಹಳ ಕಡಿಮೆ. ಸಿಕ್ಕಿರುವವೂ ಆ ಕಲಾವಿದರವೇ ಎಂಬ ಬಗ್ಗೆ ಭಿನ್ನಾಭಿಪ್ರಾಯಗಳಿಲ್ಲದಿಲ್ಲ. ಮೈರಾನನದೆನ್ನಲಾದ, ಚಕ್ರ (ಡಿಸ್ಕಸ್) ವಿಗ್ರಹ ಉತ್ಕøಷ್ಟವಾದ್ದು. ಆ ಚಕ್ರವನ್ನು ದೂರಕ್ಕೆ ಎಸೆಯುವ ಕ್ಷಣಗಳಲ್ಲಿ ತಲೆಯನ್ನು ಹಿಂಚಾಚಿ, ಎಸೆಯುವ ಕೈಯನ್ನು ದೃಷ್ಟಿಸಿ ನೋಡುವ, ಒಂದು ಕಾಲನ್ನು ತುಸು ಬಾಗಿಸಿ, ಮರುಕ್ಷಣದಲ್ಲಿ ಚಕ್ರವನ್ನು ಎಸೆಯುವಂತೆ ತೋರುವ ಈ ಸ್ಪರ್ಧಿಯ ವಿಗ್ರಹ ಗ್ರೀಕ್ ಶೈಲಿಯ ಒಂದು ಉತ್ತಮ ಮಾದರಿ.

 ಫಿಡಿಯಸ್ ಗ್ರೀಕ್ ಮಹಾಯುಗಕ್ಕೆ ಸೇರಿದ ಶಿಲ್ಪಿ. ಗ್ರೀಕ್ ದೇವತೆಗಳ ಅತ್ಯುತ್ತಮ ಶಿಲ್ಪಗಳನ್ನು ಕಡೆದ ಖ್ಯಾತಿ ಈತನದು. ಅಥೀನ ಪಾರ್ಥಿನಾನ್ 38' ಎತ್ತರದ ಭವ್ಯ ಮೂರ್ತಿ. e್ಞÁನ ಹಾಗೂ ಪಾತಿವ್ರತ್ಯವನ್ನು ಪ್ರತಿನಿಧಿಸುವ ಈ ದೇವತೆಯನ್ನು ಪರ್ಥಿನಾನ್ ದೇವಾಲಯದಲ್ಲಿ ಸ್ಥಾಪಿಸಲಾಗಿತ್ತು. ಈ ವಿಗ್ರಹವನ್ನು ದಂತ, ಚಿನ್ನ ಹಾಗೂ ಇತರ ಅಮೂಲ್ಯ ಲೋಹದಿಂದ ಮಾಡಲಾಗಿತ್ತು. ಫಿಡಿಯಸ್ ಇನ್ನೊಂದು ವಿಗ್ರಹ 60' ಎತ್ತರದ ಹೆರಕ್ಲೀಸ್‍ನ ಮೂರ್ತಿ. ಕುಳಿತಂತೆ ಇದನ್ನು ತೋರಿಸಲಾಗಿದೆ. ಇದನ್ನು ಒಲಿಂಪಿಯದ ದೇವಾಲಯದಲ್ಲಿ ಸ್ಥಾಪಿಸಲಾಗಿತ್ತು. ಪಾರ್ಥಿನಾನ್ ದೇವಾಲಯ ಈ ಸಿಲ್ಪಿಯ ಮೇಲ್ವಿಚಾರಣೆಯಲ್ಲೇ ನಿರ್ಮಾಣವಾಯಿತು. ಪೆರಿಕ್ಲೀಸನ ಒಲವನ್ನು ಸಂಪಾದಿಸಿದ ಈ ಶಿಲ್ಪಿಯ ಮೂಲಕೃತಿಗಳು ಮಾತ್ರ ದೊರೆತಿಲ್ಲ. ದೊರೆತಿರುವುದೆಲ್ಲ ಅವುಗಳ ಪ್ರತಿಕೃತಿಗಳು. 

ಪಾಲಿಕ್ಲೈಟ್ ಈತನ ಸಮಕಾಲೀನ. ಎಪಿಡಾರಸ್ ಗ್ರಾಮದಲ್ಲಿ ಗ್ರೀಕರ ದೇವತೆಯಾದ ಆಸ್ಕೀಪಿಯಸನಿಗಾಗಿ ದೊಡ್ಡ ದೇವಾಲಯವನ್ನು ಕಟ್ಟಿಸಿದವನೀತ. ಶಿಲ್ಪಕಲೆಯಲ್ಲಿ ಅನುಪಾತ ಸಿದ್ದಾಂತವನ್ನು ರೂಪಿಸಿದ ಈತ ತನ್ನ ಸಿದ್ಧಾಂತವನ್ನು ಮೂರ್ತಿಕರಿಸಲು 2' ಎತ್ತರದ ಡೊರಿಫೋರಸ್ ಮೂರ್ತಿಯನ್ನು ಕಡೆದ. ಇದರ ಮೂಲವೂ ದೊರೆತಿಲ್ಲ. ಪ್ರಾಕ್ಸಿಟಿಲೀಸನೂ ಒಲಿಂಪಿಯ ನಗರದವನೇ. ಕ್ರಿ.ಪೂ. 340 ಈತನ ಕಾಲ. ಹರ್ಮೀಸ್ ವಿಗ್ರಹದ ಶಿಲ್ಪಿಯೀತ. ಇದನ್ನು ಅಮೃತಶಿಲೆಯಲ್ಲಿ ಕಡೆಯಲಾಗಿತ್ತು. ಹರ್ಮೀಸ್ ದೇವತೆ ಡೃಯೊನೈಸಸನನ್ನು ಎಡಗೈಯಲ್ಲಿ ಎತ್ತಕೊಂಡಂತೆ ರೂಪಿಸಲಾದ 7' ಎತ್ತರದ ಈ ದೇವತೆಯನ್ನು ಹೀರ ದೇವಾಲಯದಲ್ಲಿ ಸ್ಥಾಪಿಸಲಾಗಿತ್ತು. 6 ನೆಯ ಶತಮಾನದಲ್ಲಿ ಸಂಭವಿಸಿದ ಭೂಕಂಪದಿಂದಾಗಿ ಈ ವಿಗ್ರಹ ಮಣ್ಣಿನಲ್ಲಿ ಹುದುಗಿತ್ತು. 1877 ರಲ್ಲಿ ಈ ವಿಗ್ರಹ ಬಹಳ ಮಟ್ಟಿಗೆ ಪೂರ್ವ ರೂಪದಲ್ಲೇ ದೊರೆಯಿತು. 

ವಾಸ್ತು : ಯೂರೋಪಿನ ವಾಸ್ತು ಬಹಳಮಟ್ಟಿಗೆ ಪ್ರಭಾವಿತವಾಗಿರುವುದು ಗ್ರೀಕ್ ವಾಸ್ತುವಿನಿಂದಲೇ. ಗ್ರೀಸಿನ ಪ್ರಾಚೀನ ನಾಗರಿಕ ಜೀವನಕ್ಕೆ ಸಂಬಂಧಿಸಿದ ಕಟ್ಟಡಗಳು - ವಾಸದ ಮನೆಗಳು, ಅರಮನೆಗಳು, ಇತ್ಯಾದಿ - ಹೆಚ್ಚಿಗೆ ಉಳಿದಿಲ್ಲ. ಉಳಿದಿರುವುವೆಲ್ಲ ದೇವಾಲಯದ ಅವಶೇಷಗಳೇ. ದೇವಾಲಯದ ವಿನ್ಯಾಸ, ಅವುಗಳಲ್ಲಿಯ ಸ್ತಂಭ ಶೈಲಿಗಳು ಕ್ರಿ.ಪೂ. 1600 ರಷ್ಟು ಪ್ರಾಚೀನ. ಕ್ರಿ.ಪೂ.1000 ದಷ್ಟು ಕಾಲದಿಂದ ಕ್ರಿ.ಶ. 150ರ ವರೆಗಿನ ಕಾಲದ ಸುಮಾರು 150 ದೇವಾಲಯಗಳ ಅವಶೇಷಗಳು ಗೋಚರವಾಗಿವೆ.

ಆದರೆ ಕ್ರೀಟನರ ರಾಜಧಾನಿಯಾಗಿದ್ದ ನಾಸಸ್‍ನ ಭವ್ಯ ಅರಮನೆಯ ಅವಶೇಷಗಳನ್ನು ಬ್ರಿಟಿಷ್ ಪುರಾತತ್ತ್ವಜ್ಞ ಆರ್ಥರ್ ಎವನ್ಸ್ ಈ ಶತಮಾನದ ಆರಂಭದಲ್ಲಿ ಶೋಧಿಸಿದ. ಗ್ರೀಕ್ ಇತಿಹಾಸವನ್ನರಿಯುವಲ್ಲಿ ಇದೊಂದು ಮಹತ್ತ್ವಪೂರ್ಣವಾದ ಸಾಧನೆ. ಇಲ್ಲಿಯ ಅರಮನೆಯನ್ನು ಮೊದಲು ಕಟ್ಟಿದ್ದು ಕ್ರಿ.ಪೂ. ಸು. 2100 ರಲ್ಲಿ. ಒಂದು ಶತಮಾನದೊಳಗೆ ಇದು ನಾಶಹೊಂದಿತು. ಕ್ರಿ.ಪೂ. 17 ನೆಯ ಶತಮಾನದಲ್ಲಿ ಇದನ್ನು ಮತ್ತೆ ಕಟ್ಟಲಾಯಿತು. ಆಗ ಇದರೊಂದಿಗೆ ಇನ್ನೂ ನೂರಾರು ಕಟ್ಟಡಗಳು ಆ ದ್ವೀಪದ ಬೇರೆ ಬೇರೆ ನಗರಗಳಲ್ಲಿ ತಲೆ ಎತ್ತಿದುವು. 20,000 ಚದರ ಅಡಿಗಳಷ್ಟು ವಿಸ್ತಾರವಾದ ಅಂಗಳದ ಸುತ್ತಲೂ ಮೂರು ನಾಲ್ಕು ಅಂತಸ್ತುಗಳಲ್ಲಿ ಕಟ್ಟಲಾದ ನಾಸಸ್ ಅರಮನೆ ಅಂದಿನ ವಾಸ್ತುವಿನ ಒಂದು ಚಮತ್ಕಾರ. ಲೋಹಗಳು ಮತ್ತು ಅಮೃತ ಶಿಲೆಯೂ ಕಲ್ಲುಗಳೂ ಹೆಚ್ಚು ದೊರಕದಿದ್ದುದರಿಂದ ಕಟ್ಟಡಕ್ಕೆ ಸುಣ್ಣಕಲ್ಲು ಮತ್ತು ಜಿಪ್ಸಮ್ ಉಪಯೋಗಿಸಲಾಗಿತ್ತು. ತಳಪಾಯದಲ್ಲಿ ಮತ್ತು ನೆಲದ ಅಂತಸ್ತಿನಲ್ಲಿ ಚೌಕಾಕಾರದ ಕಲ್ಲುಕಂಬಗಳನ್ನು ನಿಲ್ಲಿಸಿ ಅದರ ಮೇಲೆ ಸೈಪ್ರಸ್ ಮತ್ತು ಸಿಡಾರ್ ಮರದ ಕಂಬಗಳನ್ನೂ ಬೋದಿಗೆಗಳನ್ನೂ ಹೊದಿಸಿ ಕಲ್ಲಿನ ಕೊರತೆಯನ್ನು ತುಂಬಿಕೊಳ್ಳಲಾಗಿತ್ತು. ಅರಮನೆಯ ಕೊಠಡಿಗಳಲ್ಲಿ ವರ್ಣಚಿತ್ರಗಳನ್ನೂ ಪ್ರತಿಮೆಗಳನ್ನೂ ಕಲಾತ್ಮಕ ಪಾನಪತ್ರೆಗಳನ್ನೂ ಇರಿಸಿ ಅವನ್ನು ಸಣ್ಣ ಕಲಾಶಾಲೆಗಳನ್ನಾಗಿ ಮಾರ್ಪಡಿಸಲಾಗಿತ್ತು. ಇವುಗಳನ್ನು ನೋಡಿದಾಗ ಅಂದಿನ ಜನಾಂಗದ ಭೋಗಜೀವನ, ಕಲಾಭಿಜ್ಞತೆ, ಅಭಿರುಚಿಗಳ ಪರಿಚಯವಾಗುತ್ತದೆ. ಭೂಕಂಪ, ಪರಕೀಯರ ದಾಳಿ ಅಂತಃಕಲಹ ಮುಂತಾದ ಕಾರಣಗಳಿಂದಾಗಿ ಇಂಥ ಭವ್ಯ ನಾಗರಿಕತೆಯೂ ಕುಸಿಯಿತು. ಅದರೊಂದಿಗೆ ಕಟ್ಟಡಗಳೂ ಅಳಿದುವು. ಕಪ್ಪು ಯುಗದಲ್ಲಿ ಗ್ರೀಕ್ ದೇವಾಲಯಗಳಿದ್ದರೂ ಅವು ಮರದಿಂದ ಕಟ್ಟಲ್ಪಟ್ಟವು. ಕ್ರಿ. ಪೂ. 6 ನೆಯ ಶತಮಾನದ ಅನಂತರ ಕಲ್ಲಿನ ಕಟ್ಟಡಗಳು ಬಂದುವು. ಕಟ್ಟಡಗಳ ಕೆಳಗಿನ ತಳಪಾಯದಿಂದ ಚಾವಣಿಯ ವರೆಗೆ ಎಲ್ಲವೂ ಕ್ರಮೇಣ ಶಿಲಾಮಯವಾದುವು. ಕ್ರಿ.ಪೂ. 479 ರಲ್ಲಿ ಪರ್ಷಿಯನ್ ಕದನಗಳು ಮುಗಿದಾಗ ಅಥೆನ್ಸ್ ನಗರ ನೆಲಸಮವಾಗಿತ್ತು. ಯುದ್ಧದಿಂದ ಹಿಂದಿರುಗಿದ ಪ್ರಜೆಗಳು ಮೊದಲು ತಮ್ಮ ವಾಸಗೃಹಗಳನ್ನೂ ಅನಂತರ ಸೈನ್ಯ ಸಂಬಂಧವಾದ ಕಟ್ಟಡಗಳನ್ನೂ ಕಟ್ಟಿದರು. ಕ್ರಿ.ಪೂ. 461 ರಲ್ಲಿ ಪ್ರಜಾನಾಯಕನಾಗಿ ಬಂದ ಪೆರಿಕ್ಲೀಸ್ ನೂತನ ಯುಗವೊಂದರ ಪ್ರವರ್ತಕನಾದ. ಗ್ರೀಕ್ ಸಂಸ್ಕøತಿ ವೈಭವದ ಶಿಖರನ್ನೇರಿದ್ದು ಇವನ ಕಾಲದಲ್ಲಿ. ದೇಶದಲ್ಲಿ ಸ್ಥಿರತೆ, ಶಾಂತಿಗಳನ್ನು ನೆಲೆಗೊಳಿಸಿದ ಬಳಿಕ ಈತ ತನ್ನ ಗಮನವನ್ನೆಲ್ಲ ಅಲ್ಲಿ ದೇವಾಲಯಗಳನ್ನು ಕಟ್ಟಿಸುವುದರತ್ತ ಹರಿಸಿದ. ಆಥೆನ್ಸ್ ನಗರದ ದುರ್ಗ ಕಡಿದಾದ ಗುಡ್ಡವೊಂದರ ಮೇಲಿದೆ. 1000 x 500 ಚ.ಅ. ಪ್ರದೇಶವನ್ನು ಸಮತಲ ಮಾಡಿಸಿ ಅಲ್ಲಿ ಈತ ಪರ್ಥಿನಾನ್, ಪ್ರಾಪಿಲೀಯ ಆಥಿನ, ನೈಕ್ ಮತ್ತು ಎರಕ್ತಿಯಮ್ ಗುಡಿಗಳನ್ನು ಕಟ್ಟಿಸಿದ. ಈ ನಾಲ್ಕು ಕಟ್ಟಡಗಳ ವಿನ್ಯಾಸ, ಅಲಂಕರಣ ಮುಂತಾದುವುಗಳ ಹೊಣೆಯನ್ನು ಹೊತ್ತವನು ಪೆರಿಕ್ಲೀಸನ ಮಿತ್ರನಾದ ಶಿಲ್ಪಿ ಫಿಡಿಯಸ್. ಈ ಶಿಲ್ಪಿ ಕಡೆದ ಆಥಿನ ವಿಗ್ರಹವನ್ನು ಸ್ಥಾಪಿಸಲೆಂದೇ ಪರ್ಥಿನಾನ್ ದೇವಾಲಯವನ್ನು ಕಟ್ಟಿಸಿದ್ದು.

ಕಲ್ಲುಗಳನ್ನು ನಾಜೂಕಾಗಿ ಕತ್ತರಿಸಿ, ಗಾರೆಯನ್ನು ಬಳಸದೆ ಅವನ್ನು ಒಂದರ ಮೇಲೊಂದು ಜೋಡಿಸಿದಾಗ ಅವು ದೂರಕ್ಕೆ ಒಂದೇ ಕಲ್ಲಾಗಿರುವಂತೆ ಭಾಸವಾಗುತ್ತಿತ್ತು. ಈ ತುಂಡುಗಳ ನಡುವೆ ವರ್ತುಲನಾಳಿಯನ್ನು ಕೊರೆದು ಅದರಲ್ಲಿ ಅದರಲ್ಲಿ ಆಲಿವ್ ಮರದ ನಳಿಕೆಯನ್ನು ತಿರುಗಿಸಿದಾಗ ಎರಡು ಕಲ್ಲುಗಳನ್ನು ಒಂದಕ್ಕೊಂದು ನಯವಾಗಿ ಕೊರೆದುಕೊಂಡು ಭದ್ರವಾಗಿ ಸೇರಿಕೊಳ್ಳುತ್ತಿದ್ದುವು. ಗ್ರೀಕರ ವಾಸ್ತುವಿನ ವೈಶಿಷ್ಟ್ಯ ಇರುವುದು ಅದರ ಕಂಬಗಳಲ್ಲಿ. ಅವುಗಳಲ್ಲಿ ಡೋರಿಕ್, ಐಯೋನಿಕ್ ಮತ್ತು ಕಾರಿಂತಿಯನ್ ಎಂಬ ಮೂರು ಪ್ರತ್ಯೇಕ ಶೈಲಿಗಳನ್ನು ಗುರುತಿಸಬಹುದು. ದೇವಾಲಯದಲ್ಲಿ ದೇವತೆಯ ಒಂದು ದೊಡ್ಡ ಪ್ರತಿಮೆ ಪ್ರಮುಖ ಆಕರ್ಷಣೆ. ದೀರ್ಘ ಚತುರಸ್ರಾಕಾರದ ಕಟ್ಟಡವನ್ನು ಕಟ್ಟುತ್ತಿದ್ದರು. ಇದು ಮೊದಲು ಉದ್ದವಾಗಿ ಇಕ್ಕಟ್ಟಾಗಿತ್ತು. ಒಳಗಿನ ಮೂರ್ತಿ ಚೆನ್ನಾಗಿ ಕಾಣುವಂತೆ ಕ್ರಮೇಣ ಇದರ ಅಗಲವನ್ನು ಹೆಚ್ಚಿಸಲಾಯಿತು. ತಗ್ಗಾದ ಸಮತಲ ಜಗುಲಿಯ ಮೇಲೆ ಆಲಯದ ಕಂಬಗಳನ್ನು ನಿಲ್ಲಿಸಲಾಗಿತ್ತು. ಈ ಜಗುಲಿಗೆ ಮೂರು ಮೆಟ್ಟಲುಗಳಿದ್ದುವು. ಈ ಮೆಟ್ಟಲುಗಳು ಸಮತಲ ಸಿದ್ಧಾಂತವನ್ನನುಸರಿಸಿ ಕಟ್ಟಿದುವು. ಗರ್ಭಗೃಹದ ಸುತ್ತಲೂ ಪ್ರದಕ್ಷಿಣಾಪಥವಿತ್ತು. ಇದರ ಎರಡೂ ಕಡೆ ಕಂಬಗಳ ಸಾಲು. ಕಟ್ಟಡದ ಚಾವಣಿ ತ್ರಿಕೋನಾಕಾರದಲ್ಲಿ ಚಂದಾಯದಲ್ಲಿತ್ತು. ಗ್ರೀಕ್ ವಸ್ತುಶಿಲ್ಪದಲ್ಲಿ ಕಮಾನಿನ ಬಳಕೆಯೆ ಇರಲಿಲ್ಲ. ಕಂಬಗಳು ಮಧ್ಯಭಾಗದಲ್ಲಿ ತುಸು ಉಬ್ಬಿದ್ದು ಮೇಲಕ್ಕೆ ಹೋದಂತೆಲ್ಲ ಕ್ರಮೇಣ ಸಣ್ಣದಾಗುತ್ತಿತ್ತು. ಸ್ತಂಭಗಳು ಹಾಸುಗಲ್ಲುಗಳನ್ನವಲಂಬಿಸಿದ್ದುವು. ಕಟ್ಟಡದ ಶೈಲಿಯನ್ನು ಇವುಗಳಿಂದ ಗುರುತಿಸಬಹುದು. ಕಂಬದ ಬೋದಿಗೆಯಂತೂ ಒಂದೊಂದು ಶೈಲಿಯಲ್ಲೂ ಭಿನ್ನವಾಗಿದ್ದು ನಿರ್ಣಯಾತ್ಮಕ ಅಂಶವಾಗಿತ್ತು. ಡೋರಿಕ್ ಶೈಲಿಯ ಕಂಬದ ಉದ್ದ ಅದರ ವ್ಯಾಸದ ನಾಲ್ಕರಷ್ಟು ಇರುತ್ತಿತ್ತು. ಐಯೊನಿಕ್ ಕಂಬಗಳಿಗೆ ಸಣ್ಣಪಾದ ಇದ್ದು, ಕಂಬಗಳಲ್ಲಿ ಅರೆಗೊಳವಿಗಳು ಡೋರಿಕ್ ಕಂಬಗಳದವಕ್ಕಿಂತ ಭಿನ್ನವಾಗಿದ್ದುವು. ಕಂಬದ ಬೋದಿಗೆಯಲ್ಲಿ ಸುರುಳಿಯ ಅಲಂಕಾರವಿತ್ತು. ಕಾರಿಂತಿಯನ್ ಶೈಲಿ ಗ್ರೀಕರ ಕೊಡುಗೆಯಾದರೂ ಅವರು ಅದನ್ನು ಬಹಳವಾಗಿ ಉಪಯೋಗಿಸಲಿಲ್ಲ. ಆದರೆ ಅನಂತರದ ರೋಮನ್ನರ ಕಾಲದಲ್ಲಿ ಈ ಶೈಲಿ ಬಹಳ ಪ್ರಿಯವಾಯಿತು. ಈ ಶೈಲಿಯಲ್ಲಿ ಕಂಬದ ಬೋದಿಗೆಯ ಮಧ್ಯಭಾಗ ಘಂಟೆಯ ಆಕಾರದಲ್ಲಿತ್ತು. ಅದರ ಮೇಲೆ ಒಂದು ಮಣಿ ಚೌಕಟ್ಟನ್ನು ಕೂಡಿಸಲಾಗಿತ್ತು. ಈ ಘಂಟೆಯ ಕೆಳಭಾಗದಲ್ಲಿ ಪತ್ರಾಕೃತಿಯ ಅಲಂಕಾರವಿರುತ್ತಿತ್ತು.
(ಜಿ.ಬಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ